ಪಂಚಾಮೃತ -
ಧಾರವಾಡ ಜಿಲ್ಲೆಯ ಗದಗ್‍ನ್ನಿಂದ ಪ್ರಕಟವಾಗುತ್ತಿದ್ದ ಮಾಸಪತ್ರಿಕೆ. 1961 ರ ಏಪ್ರಿಲ್‍ನಲ್ಲಿ ಆರಂಭವಾಯಿತು. ಡೆಮಿ ಅಷ್ಟದಳ ಆಕಾರದ ಸುಮಾರು 120 ಪುಟಗಳಿಂದ ಕೂಡಿದ್ದ ಈ ಪತ್ರಿಕೆಯ ಸಂಪಾದಕರು ಪಂಢರೀನಾಥಾಚಾರ್ಯ ಗಲಗಲಿ. ವಿವಿಧ ಅಭಿರುಚಿಗಳ ವಾಚಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಲೇಖನಗಳನ್ನು ಪ್ರಕಟಿಸಲಾಗುತ್ತಿತ್ತು. ಮನೋರಂಜಕ ಹಾಗಾ ನೀತಿ ಬೋಧಕ ವಿಷಯಗಳಿಗೆ ಹೆಚ್ಚು ಗಮನ ಸಲ್ಲುತ್ತಿತ್ತು. ಹಾಸ್ಯ ಲೇಖನಗಳು, ವಿಚಾರಪೂರ್ಣ ಬರಹಗಳು, ಸಾಮಾಜಿಕ ಐತಿಹಾಸಿಕ ಹಾಗೂ ಪತ್ತೆದಾರಿ ಕಥೆಗಳು ಆಕರ್ಷಕವಾಗಿ ಬರುತ್ತಿದ್ದುವು. ಪತ್ರಿಕೆಯ ಕೆಲವು ಪ್ರಧಾನ ವಿಭಾಗಗಳು ವೇದಬೋಧ, ಸಂಸ್ಕøತ ಕವಿ ಕೃತಿ ಪರಿಚಯ, ಸುಭಾಷಿತಗಳು, ದೊಡ್ಡವರ ಸಣ್ಣ ಕಥೆಗಳು, ಮತ್ತು ಪುಸ್ತಕ ವಿಭಾಗ. ಪುಸ್ತಕ ವಿಭಾಗ ಪತ್ರಿಕೆಯ ಕೊನೆಯಲ್ಲಿ ಪ್ರಕಟವಾಗುತ್ತಿತ್ತು. ಈ ವಿಭಾಗದಲ್ಲಿ ಹೆಚ್ಚಾಗಿ ಬರುತ್ತಿದ್ದುದು ಮರಾಠಿ, ತೆಲುಗು, ಹಿಂದಿ ಇತ್ಯಾದಿ ಭಾಷೆಗಳಲ್ಲಿಯ ಕಾದಂಬರಿಗಳ ಭಾಷಾಂತರಗಳು.

ಪಂಚಾಮೃತ ಸುಂದರವಾಗಿ ಪ್ರಕಟವಾಗುತ್ತಿತ್ತು. ಹೊದಿಕೆಯ ಮೇಲೆ ವರ್ಣರಂಜಿತ ಚಿತ್ರವಿರುತ್ತಿತ್ತು. 1937 ರ ನವೆಂಬರ್ ದೀಪಾವಳಿ ಸಂಚಿಕೆಯೊಂದಿಗೆ ಪತ್ರಿಕೆ ಡೆಮಿ ಅಷ್ಟದಳ ಆಕಾರ ತಾಳಿತು. ಅ ವೇಳೆಗೆ ಪತ್ರಿಕೆ ಆರ್ಥಿಕ ಮುಗ್ಗಟ್ಟಿಗೊಳಗಾಗಿದ್ದಿತೆಂಬುದು ವ್ಯಕ್ತವಾಗುವುದು. ಸಂಪಾದಕ ಗಲಗಲಿಯವರೇ ಪತ್ರಿಕೆಯ ಎಲ್ಲ ಹೊಣೆಯನ್ನೂ ಹೊತ್ತಿದ್ದುದರಿಂದ ಪ್ರಕಟಣೆಯನ್ನು ನಿರ್ವಹಿಸುವುದು ಕೊನೆಕೊನೆಗೆ ಬಹಳ ಕಷ್ಟಕರವಾಗಿ ಪರಿಣಮಿಸಿತು. 1972 ರ ಹೊತ್ತಿಗೆ ಪತ್ರಿಕೆ ನಿಂತು ಹೊಯಿತು.

ಪಂಚಾಮೃತ ಜೀವಂತವಾಗಿದ್ದ ಕಾಲದಲ್ಲಿ ಪಂಢರಿನಾಥಾಚಾರ್ಯ ಗಲಗಲಿಯವರು ಕನ್ನಡ ಪತ್ರಕೋದ್ಯಮದಲ್ಲಿ ತಮ್ಮ ಸಾಮಥ್ರ್ಯವನ್ನು ಅದರ ಮೂಲಕ ಪ್ರಕಟಿಸಿದರು. ಈ ಅಲ್ಪಾವಧಿಯಲ್ಲಿ ಪತ್ರಿಕೆ ಕನ್ನಡ ಓದುಗರ ಮನವನ್ನು ಸೆಳೆದು ಜನಾದರಣೀಯ ಸಾಹಿತ್ಯವನ್ನು ಹಂಚಿತು. ಪತ್ರಿಕೆ ಉಚ್ಛ್ರಾಯಸ್ಥಿತಿಯಲ್ಲಿದ್ದಾಗ ಪ್ರತಿ ತಿಂಗಳೂ ಹಂಚಿಕೆಯಾಗುತ್ತಿದ್ದ ಪ್ರತಿಗಳ ಸಂಖ್ಯೆ ಸುಮಾರು 11,000. 										(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ